ಕಾರ್ಡೇಟ

 ಪ್ರಾಣಿಸಾಮ್ರಾಜ್ಯದ ಒಂದು ಬಹುಪ್ರಮುಖವಾದ ವಿಭಾಗ. ಆದಿ ಕಾರ್ಡೇಟುಗಳು, ಸೈಕ್ಲೊಸ್ಟೊಮೇಟುಗಳು (ಚಕ್ರಾಸ್ಯಗಳು), ಮೀನುಗಳು, ದ್ವಿಚರಿಗಳು, ಸರೀಸೃಪಗಳು, ಪಕ್ಷಿ ಮತ್ತು ಸ್ತನಿಗಳ ವರ್ಗಗಳು ಇದರಲ್ಲಿ ಸೇರಿದೆ. ಊಧ್ರ್ವಭಾಗದ ನಳಿಕೆಯಂತಿರುವ ನರಹುರಿ, ನೋಟೋಕಾರ್ಡ್ ಮತ್ತು ಗಂಟಲಿನ ಭಾಗದಲ್ಲಿರುವ ಕಿವಿರು ರಂಧ್ರಗಳು ಈ ಸಮುದಾಯಕ್ಕೆ ಸೇರಿದ ಪ್ರಾಣಿಗಳ ಅತಿ ವಿಶಿಷ್ಟ ಲಕ್ಷಣಗಳು, ಇವಲ್ಲದೆ ಉಭಯಪಾಶ್ರ್ವ ಸಮಾಂಗತೆ, 3 ಜನನ ಪದರಗಳು (ಜರ್ಮ್ ಲೇಯರ್ಸ್), ಖಂಡಸ್ಥ ದೇಹ, ಸಂಪೂರ್ಣವಾಗಿ ರೂಪುಗೊಂಡ ಪಚನ ಮಂಡಲ, ಚೆನ್ನಾಗಿ ರೂಪಿತವಾದ ಸೀಲೋಮ್ ಇತರ ಮುಖ್ಯ ಲಕ್ಷಣಗಳು.

 ನರಹುರಿ ನಳಿಕೆಯಂತೆ ಟೊಳ್ಳಾಗಿದೆ. ಇದರ ಮುಂಭಾಗ ಕೆಲವು ನಿಮ್ನವರ್ಗದ ಕಾರ್ಡೇಟುಗಳಲ್ಲಿ ಸರಳವಾದ ಮಿದುಳು ಕೋಶದಂತೆಯೂ ಉಳಿದೆಲ್ಲ ಕಾರ್ಡೇಟುಗಳಲ್ಲಿ ಮಿದುಳಾಗಿಯೂ ಮಾರ್ಪಾಡಾಗಿದೆ. ಮಿದುಳಿನ ಹಿಂಭಾಗವೇ ಮಿದುಳುಬಳ್ಳಿ. ಹೆಮಿಕಾರ್ಡೇಟ ಉಪಭಾಗದ ಪ್ರಾಣಿಗಳಲ್ಲಿ ನರ ಅಂಗಾಂಶ ಹರಡಿಕೊಂಡಿದೆ. ಟ್ಯೂನಿಕೇಟ ಗುಂಪಿನವುಗಳಲ್ಲಿ ರೂಪಾಂತರತೆಯ ಹಂತದಲ್ಲಿ ಹುರಿಯೂ ಮಿದುಳು ಕೋಶವೂ ಗ್ಯಾಂಗ್ಲಿಯ ಆಗಿ ಪರಿವರ್ತಿತವಾಗುತ್ತವೆ. ಉನ್ನತ ವರ್ಗದ ಕಾರ್ಡೇಟಗಳಲ್ಲಿ ಕಶೇರುಸ್ತಂಭದಿಂದ ಕಮಾನುಗಳು ಹುಟ್ಟಿಕೊಂಡು ನರಹುರಿಯನ್ನು ಸುತ್ತುವರಿದು ಅದಕ್ಕೆ ರಕ್ಷಣೆ ನೀಡುತ್ತವೆ. ಮಿದುಳು ಮಸ್ತಕದಿಂದ ಆವೃತವಾಗಿದೆ.

 ನರಹುರಿಯ ಕೆಳಬದಿಯಲ್ಲಿ ದೇಹಕ್ಕೆ ಆಧಾರವಾಗಿರುವ ನೋಟೋಕಾರ್ಡ್ ಇದೆ. ಸರಳಿನಂತಿರುವ ಇದು ಆದಿಕಾರ್ಡೇಟುಗಳಲ್ಲಿ ಜೀವಾವಧಿ ಉಳಿಯುತ್ತದೆ. ಉಳಿದೆಲ್ಲ ಕಾರ್ಡೇಟುಗಳಲ್ಲಿ ಭ್ರೂಣಾವಸ್ಥೆಯಲ್ಲಿ ಮಾತ್ರ ಇದ್ದು ಪ್ರಬುದ್ಧಾವಸ್ಥೆಯಲ್ಲಿ ಕ್ಷೀಣಗೊಂಡು ಕಶೇರುಸ್ತಂಭದಿಂದ ಆವೃತಗೊಳ್ಳುತ್ತದೆ ಇಲ್ಲವೆ ಸ್ಥಾನಪಲ್ಲಟಗೊಳ್ಳುತ್ತವೆ. ಹೆಮಿಕಾರ್ಡೇಟ್ ಪ್ರಾಣಿಗಳಲ್ಲಿ ಇದು ಚಿಕ್ಕದು ಮತ್ತು ದೇಹದ ಮುಂಭಾಗದಲ್ಲಿದೆ. ಟ್ಯೂನಿಕೇಟ ಪ್ರಾಣಿಗಳಲ್ಲಿ ಡಿಂಭಾವಸ್ಥೆಯಲ್ಲಿ ಬಾಲದ ಭಾಗದಲ್ಲಿ ಮಾತ್ರ ಇದೆ. ಸಿಫ್ಯಾಲೋಕಾರ್ಡೇಟ ಮತ್ತು ಉಳಿದ ಉಚ್ಚವರ್ಗದ ಪ್ರಾಣಿಗಳಲ್ಲಿ ದೇಹದುದ್ದಕ್ಕೂ ಚಾಚಿದೆ. ನೋಟೋಕಾರ್ಡಿನ ಕಾರ್ಯ ದೇಹಕ್ಕೆ ಕೇವಲ ಆಧಾರದಂತಿರುವುದು ಎಂದು ಕೆಲವರ ಅಭಿಪ್ರಾಯವಾದರೆ ಶರೀರದ ಸ್ನಾಯುಗಳ ಚಲನವಲನಕ್ಕೆ ಸಹಾಯಕವಾಗಿದೆ ಎಂದು ಇನ್ನು ಕೆಲವರು ಅಭಿಪ್ರಾಯಪಡುತ್ತಾರೆ. ಇದರ ಕಾರ್ಯ ಏನೇ ಇರಲಿ ಇದರ ಉತ್ಪತ್ತಿ ಕಾರ್ಡೇಟುಗಳ ವಿಕಾಸದಲ್ಲಿನ ಒಂದು ಮಹತ್ತ್ವಪೂರ್ಣ ಘಟನೆಯೆಂಬುದನ್ನು ಎಲ್ಲರೂ ಒಪ್ಪುತ್ತಾರೆ.

 ಕಾರ್ಡೇಟುಗಳ ಇನ್ನೊಂದು ವಿಶಿಷ್ಟ ಲಕ್ಷಣವಾದ ಕಿವಿರು ರಂಧ್ರಗಳು ಅನ್ನನಾಳ ಅಗ್ರಭಾಗವಾದ ಗಂಟಲಿನ (ಫ್ಯಾರಿಂಕ್ಸ್) ಅಕ್ಕಪಕ್ಕಗಳಲ್ಲಿವೆ. ಎಲ್ಲ ಕಾರ್ಡೇಟುಗಳ ಭ್ರೂಣಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಇವು ಹೆಮಿಕಾರ್ಡೇಟ, ಟ್ಯೂನಿಕೇಟ, ಸಿಫ್ಯಾಲೋಕಾರ್ಡೇಟ, ಮತ್ತು ಮೀನುಗಳಲ್ಲೆಲ್ಲ ಪ್ರೌಢಾವಸ್ಥೆಯಲ್ಲೂ ಇವೆ. ಜಲಶ್ವಸನ ಕ್ರಿಯೆಗೆ ಇವು ಅತ್ಯಗತ್ಯ. ದ್ವಿಚರಿಗಳಲ್ಲಿ ಡಿಂಭಾವಸ್ಥೆಯಲ್ಲಿ ಮಾತ್ರ ಇದ್ದು ಪ್ರೌಢಾವಸ್ಥೆಯಲ್ಲಿ ಶ್ವಾಸಕೋಶಗಳಿಂದ ಸ್ಥಾನಪಲ್ಲಟಗೊಳ್ಳುತ್ತವೆ. ಉಳಿದೆಲ್ಲ ಕಾರ್ಡೇಟುಗಳಲ್ಲಿ ಭ್ರೂಣಾವಸ್ಥೆಯ ಪ್ರಥಮ ಹಂತಗಳಲ್ಲಿ ಮಾತ್ರ ಕಾಣಿಸಿಕೊಳ್ಳತ್ತವೆ, ಆಗಲೂ ಇವು ಅನುಪಯುಕ್ತವಾಗಿದೆ.

 ಕಾರ್ಡೇಟುಗಳ ಉಗಮ ಹೇಗಾಯಿತೆಂಬ ಪ್ರಶ್ನೆ ಕ್ಲಿಷ್ಟ. ಇದು ಅನೇಕ ವಿಕಾಸ ತಜ್ಞರ ಗಮನ ಸೆಳೆದಿದೆ. ಇವು ಒಂದಿಲ್ಲೊಂದು ಅಕಶೇರುಕ ಗುಂಪಿನಿಂದ ಹುಟ್ಟಿರಬಹುದೆಂದು ವಾದಿಸಬಹುದಾದರೂ ಈ ಪ್ರಶ್ನೆಗೆ ತೃಪ್ತಿಕರವಾದ ಉತ್ತರ ಈವರೆಗೂ ದೊರೆತಿಲ್ಲ. ಅನೆಲಿಡ, ನೆಮೆರ್ಟಿನಿಯ, ಆಥ್ರ್ರೋಪೋಡ ಮತ್ತು ಎಕಿನೋಡರ್ಮೇಟ ಹೀಗೆ ಈ ನಾಲ್ಕು ಗುಂಪಿನ ಪ್ರಾಣಿಗಳಿಂದ ಬೇರೆಬೇರೆಯಾಗಿ ಕಾರ್ಡೇಟುಗಳು ವಿಕಾಸವಾಗಿವೆಯೆಂದು ನಾಲ್ಕು ವಾದಗಳಿವೆ. ಇಂಥ ವಾದಗಳಲ್ಲಿ ಎರಡು ಮಾತ್ರ ಬಹುಪಾಲು ತಜ್ಞರಿಂದ ಮಾನ್ಯವಾಗಿರುವುದರಿಂದ ಗಮನಾರ್ಹವಾಗಿವೆ. 1 ವಿಲ್ಲೀ ಎಂಬುವನ ಶಾಸ್ತ್ರೀಯವಾದ (1891). ಇವನ ವಾದದ ಪ್ರಕಾರ ಮೂಲ ಕಾರ್ಡೇಟುಗಳು ಈಗಿನ ಅಸಿಡಿಯನ್ ಡಿಂಭಗಳಂಥ ಪ್ರಾಣಿಗಳಿಂದಾಗಿರದೆ ಈಗಿನ ಪ್ರೌಢಾವಸ್ಥೆಯ ಅಸಿಡಿಯನುಗಳನ್ನು ಹೋಲುತ್ತಿದ್ದ ಪ್ರಾಚೀನ ಪ್ರಾಣಿಗಳಿಂದ ಉದ್ಭವಿಸಿದುವು. 2 ಗಾಸ್ರ್ಟಾಂಗನ ಡಿಂಭವಿಕಾಸವಾದ (1928). ಕಾರ್ಡೇಟುಗಳ ಉಗಮ ಈಗಿನ ಅಸಿಡಿಯನ್ ಡಿಂಭಗಳಂಥ ಪ್ರಾಣಿಗಳಿಂದಾಗಿರದೆ ಈಗಿನ ಪ್ರೌಢಾವಸ್ಥೆಯ ಅಸಿಡಿಯನುಗಳನ್ನು ಹೋಲುತ್ತಿದ್ದ ಡಿಂಭಗಳನ್ನುಳ್ಳ ಅಚರ ಪ್ರಾಣಿಗಳಿಂದ ಆಗಿದೆಯೆಂದು ಇವನ ವಾದ. ಈ ಡಿಂಭ ಈಗಿನ ಎಕಿನೋಡರ್ಮ್‍ಗಳ ಡೈಪ್ಲೂರುಲ ಡಿಂಭದಂತೆ ಇದ್ದಿತೆಂದೂ ಅದರ ವಿವಿಧ ಭಾಗಗಳಿಂದ ನರಹುರಿ, ನೋಟೋಕಾರ್ಡ್ ಮತ್ತು ಕಿವಿರು ರಂಧ್ರಗಳು ಉದ್ಭವವಾದುವೆಂದು ಈ ವಾದದ ಮೂಲನಂಬಿಕೆ. ಬೆರಿಲ್ ಎಂಬಾತ ಈ ವಾದವನ್ನು ಭಾಗಶಃ ಅನುಮೋದಿಸುತ್ತ ಡೈಪ್ಲೂರುಲ ಡಿಂಭವೇ ನೇರವಾಗಿ ಕಾರ್ಡೇಟುಗಳ ಉತ್ಪತ್ತಿಗೆ ಕಾರಣವಾಗಲಿಲ್ಲವೆಂದೂ ಕೆಲವು ವಿಶಿಷ್ಟ ಕಾರಣಗಳ ಪರಿಣಾಮವಾಗಿ ಇಂಥ ಡಿಂಭ ಅಸಿಡಿಯನ್‍ಗಳಲ್ಲಿ ಉದ್ಭವವಾಗಿ ಅಲ್ಲಿಂದ ಉಳಿದ ಕಾರ್ಡೇಟುಗಳು ಜನಿಸಿದುವೆಂದೂ ವಿವರಣೆಯಿತ್ತಿದ್ದಾನೆ.

 ಕಾರ್ಡೇಟ ವಿಭಾಗದಲ್ಲಿ ನಾಲ್ಕು ಪ್ರಮುಖ ಉಪವಿಭಾಗಗಳಿವೆ:

 1 ಹೆಮಿಕಾರ್ಡೇಟ-ಟಂಗ್‍ವಮ್ರ್ಸ್ ಮತ್ತು ಅಕಾರ್ನ್ ವಮ್ರ್ಸ್

 2 ಯೂರೊಕಾರ್ಡೇಟ ಅಥವಾ ಟ್ಯೂನಿಕೇಟ-ಟ್ಯೂನಿಕೇಟ್ಸ್ ಮತ್ತು ಅಸಿಡಿಯನ್ಸ್.

 3 ಸಿಫ್ಯಾಲೊಕಾರ್ಡೇಟ-ಆಂಫಿಯಾಕ್ಸಸ್, ಲ್ಯಾನ್ಸೆಲೆಟ್ಸ್

 4 ವರ್ಟಿಬ್ರೇಟ ಅಥವಾ ಕ್ರೇನಿಯೇಟ-ಸೈಕ್ಲೋಸ್ಟೊಮೇಟುಗಳು, ಮೀನುಗಳು, ದ್ವಿಚರಿಗಳು, ಸರೀಸೃಪಗಳು, ಪಕ್ಷಿಗಳು ಮತ್ತು ಸಸ್ತನಿಗಳು.    (ನೋಡಿ- ಕಶೇರುಕ )

 (ಬಿ.ವೈ.ಎಂ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ